ಬೆಂಗಳೂರು: ದೇವರ ಚಿತ್ರವನ್ನು ಕಮರ್ಷಿಯಲ್ ಅಂಶದೊಂದಿಗೆ ಮಾಸ್ ಆಗಿ ತೋರಿಸಿ ಗೆದ್ದಿರುವ ಚಿತ್ರ ’ಸಿಂಹರೂಪಿಣಿ’ ಅಂದುಕೊಂಡಂತೆ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇದರನ್ವಯ ಸಿನಿಮಾಕ್ಕೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಪಾರಿತೋಷಕ ವಿತರಿಸುವ ಕಾರ್ಯಕ್ರಮವನ್ನು ’ಸ್ವಪ್ನ’ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ’ಕೆಜಿಎಫ್’ ’ಸಲಾರ್’ ’ಭೈರತಿ ರಣಗಲ್’ ಮುಂತಾದ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುವ ಕಿನ್ನಾಳ್‌ರಾಜ್ ಚಿತ್ರಕಥೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಚಿತ್ರ ಮಾಡಲು ಯೋಗ, ಯೋಗ್ಯತೆ ಅದಕ್ಕಿಂತ ಹೆಚ್ಚಾಗಿ ಅದೃಷ್ಟ ಕೂಡಿಬರಬೇಕು. ಇವೆಲ್ಲವು ನಮಗೆ ಸಿಕ್ಕಿದೆ. ಎಲ್ಲಾ ಕಲಾವಿದರು ಕಥೆ ಕೇಳಿದೊಡನೆ ಯಾವಾಗ ಬರಲಿ ಅಂತ ಹೇಳುತ್ತಿದ್ದರು. ಎಲ್ಲರೂ ಭಕ್ತಿಯಿಂದ, ಇಷ್ಟದಿಂದ ಮಾಡಿದ್ದಾರೆ. ವ್ಯವಹಾರಿಕವಾಗಿ ನಿರ್ಮಾಪಕರು ಸೇಫ್ ಆಗಿದ್ದಾರೆ. ಮಾಧ್ಯಮದ ಸಹಕಾರ ಮರೆಯುವಂತಿಲ್ಲ.

ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಕೋಣ ಏಕೆ ಕಡಿಯುತ್ತಾರೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದೀರಾ. ಸೆಕೆಂಡ್ ಆಫ್ ಕಾಂತಾರ ಚಿತ್ರ ಮೀರಿಸುವಂತಿತ್ತು. ಭಕ್ತಿ ಕಥೆಗೆ ಸಿಂಹರೂಪಿಣಿ ಸಾಕ್ಷಿಯಾಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಒಂಬತ್ತು ತಿಂಗಳ ಶ್ರಮ ಸಾರ್ಥಕ ಅನಿಸಿದೆ. ಬ್ಯಾಂಕಾಕ್ ಫಿಲಂ ಫೆಸ್ಟಿವಲ್‌ದಲ್ಲಿ ಪ್ರಶಸ್ತಿ ಲಭಿಸಿದ್ದು ಖುಷಿ ವಿಷಯ. ಭಾಗ-2 ಮಾಡುವ ಯೋಜನೆ ಇದ್ದು, ಮುಂದಿನ ವಾರದಿಂದಲೇ ಉತ್ತರ ಕರ್ನಾಟಕ ಹಾಗೂ ರಾಜ್ಯಾದ್ಯಂತ ಜನರಿಗೆ ತಲುಪಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಸುಂದರ ಸಮಾರಂಭದಲ್ಲಿ ಯಶಸ್ವಿನಿ, ಅಂಕಿತಾಗೌಡ, ಯಶ್‌ಶೆಟ್ಟಿ, ಪುನೀತ್‌ರುದ್ರನಾಗ್, ಆರವ್‌ಲೋಹಿತ್, ಸಾಗರ್, ವಿಜಯ್‌ಚೆಂಡೂರು, ಸಂಗೀತ ಸಂಯೋಜಕ ಆಕಾಶ್‌ಪರ್ವ, ಛಾಯಾಗ್ರಾಹಕ ಕಿರಣ್‌ಕುಮಾರ್, ಸಂಕಲನಕಾರ ಯುಡಿವಿ.ವೆಂಕಿ, ವಿತರಕ ರಮೇಶ್ ಮುಂತಾದವರು ಸಂತಸ ಹಂಚಿಕೊಂಡರು.

LEAVE A REPLY

Please enter your comment!
Please enter your name here