ವರದಿ: ಮಂಜುನಾಥ್ ಜಿ ಎನ್.ತುಮಕೂರು.
ತುಮಕೂರು: ದಲಿತರಿಂದ ಮಲ ಸ್ವಚ್ಚಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ವಿಜಯವಾರ್ತೆಯ ನಿರಂತರ ವರದಿಗೆ ಫಲಶೃತಿ ಸಿಕ್ಕಿದೆ.
ಮಲಹೊರುವ ಪದ್ದತಿ ನಿಷೇಧ ಕಾಯ್ದೆ( ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಆಕ್ಟ್ ) ಅಡಿಯಲ್ಲಿ ನಾಲ್ವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ದಲಿತ ಬಾಲಕರನ್ನ ಮಲ ಸ್ವಚ್ಚತೆಗೆ ಕರೆತಂದಿದ್ದ ತುಮಕೂರಿನ ಕೋತಿತೋಪು ನಿವಾಸಿ ಕುಮಾರ್, ಶೌಚಾಲಯದ ಗುತ್ತಿಗೆ ಪಡೆದಿರುವ ನಿಮಿಶಾಂಬ ಎಂಟರ್ ಪ್ರೈಸಸ್ ನ ಸೂಪರ್ ವೈಸರ್ ನಿತೇಶ್, ನಿಮಿಶಾಂಬ ಎಂಟರ್ ಪ್ರೈಸಸ್ ಮಾಲೀಕರಾದ ಶ್ವೇತಾ, ಹಾಗೂ ಕೊರಟಗೆರೆ ಸಾರಿಗೆ ನಿಯಂತ್ರಕ ಸತ್ಯನಾರಾಯಣ ರೇಡ್ಡಿ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಎಫ್ ಐ ಆರ್ ನಲ್ಲಿ ಬಾಲಕಾರ್ಮಿಕ ಆಕ್ಟ್ ಹಾಗೂ ವಯಸ್ಕ ವ್ಯಕ್ತಿಯನ್ನ ಕೈಬಿಟ್ಟ ಅಧಿಕಾರಿಗಳು.
ಎಫ್ ಐ ಆರ್ ನಲ್ಲಿ ಬಾಲಕಾರ್ಮಿಕ ಕಾಯ್ದೆ ಉಲ್ಲಂಘನೆ ಆಕ್ಟ್ ಹಾಗೂ ಮತ್ತೊರ್ವ ವಯಸ್ಕ ವ್ಯಕ್ತಿಯನ್ನ ಕೈಬಿಡಲಾಗಿದೆ. ಜೊತೆಗೆ ಎಫ್ ಐ ಆರ್ ನ ವಿವರಣೆಯಲ್ಲಿ ಬಾಲಕನಿಂದ ಬರಿಗೈಯಲ್ಲಿ ಸ್ವಚ್ಚತೆ ಮಾಡಿಸಲಾಗಿದೆ ಎಂದಷ್ಟೇ ಇದ್ದು ಶೌಚಾಲಯದ ಮಲದ ಗುಂಡಿಯ ಬಗ್ಗೆ ಉಲ್ಲೇಖಿಸದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಅಲ್ಲದೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾಧ್ಯಮ ಸ್ಪಷ್ಟೀಕರಣ ದಲ್ಲಿ ದಲಿತ ವ್ಯಕ್ತಿಗೆ ಮಾನಸಿಕ ಅಸ್ವಸ್ಥ ಎಂದು ಅವಮಾನಸಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಿ ಅಟ್ರಾಸಿಟಿ ಅಡಿಯಲ್ಲಿ ದೂರು ದಾಖಲಿಸಬೇಕಿತ್ತು ಆದರೆ ಇದೆಲ್ಲವನ್ನೂ ಎಫ್ ಐ ಆರ್ ನಲ್ಲಿ ದಾಖಲಿಸಿದೆ ಇರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ. ಪ್ರಕರಣವನ್ನ ಮುಚ್ಚಿಹಾಕುವ ಪ್ರಯತ್ನ ಯಾಕೆ ಮಾಡಲಾಗ್ತಿದೆ, ಇದರ ಹಿಂದೆ ಯಾರಿದ್ದಾರೆ, ಅಧಿಕಾರಿಗಳು ಯಾರ ರಕ್ಷಣೆಗೆ ನಿಂತಿದ್ದಾರೆ ಎಂದು ದಲಿತ ಮುಖಂಡ ದಾಡಿ ವೆಂಕಟೇಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ವಿಜಯವಾರ್ತೆ ನಿರಂತರ ವರದಿಯ ಫಲಶೃತಿ
ನವೆಂಬರ್ 06 ರಂದು ಕೊರಟಗೆರೆ ಕೆಎಸ್ಆರ್ಟಿಸಿ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯದ ಪಿಟ್ ತುಂಬಿ ಹೊರಗೆ ಹರಿದಿದ್ದ ಮಲವನ್ನ ದಲಿತ ಬಾಲಕಾರ್ಮಿಕ ಹಾಗೂ ವಯಸ್ಕ ವ್ಯಕ್ತಿಯಿಂದ ಸ್ವಚ್ಚಗೊಳಿಸಿದ್ದರು. ಈ ಬಗ್ಗೆ ವಿಜಯವಾರ್ತೆಯಲ್ಲಿ ದೃಷ್ಯ ಸಮೇತ ವರದಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸೂಚನೆ ಮರೆಗೆ ಸಫಾಯಿ ಕರ್ಮಾಚಾರಿ ಆಯೋಗದಿಂದ ತುಮಕೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು.
ಬಳಿಕ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ತಹಶಿಲ್ದಾರ್ ಮಂಜುನಾಥ್ ಕೊರಟಗೆರೆ ಬಸ್ ನಿಲ್ದಾಣಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾದ್ಯಮಗಳೊಂದಿಗೆ ಮಾತನಾಡಿ ಶೌಚಾಲಯದ ಗುಂಡಿ ತುಂಬಿ ಹರಿದಿರುವುದು ಕಂಡು ಬಂದಿದೆ ಎಂದಿದ್ದರು. ಬಳಿಕ ಮದುಗಿರಿ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖಾ ಸಮೀತಿ ರಚನೆ ಮಾಡಿ ತನಿಖಾ ವರದಿ ನೀಡಿದ ಬಳಿಕ ಶನಿವಾರ ಸಂಜೆ ಕಂದಾಯ ಇಲಾಖೆಯಿಂದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಆಕ್ಟ್ ಅಡಿಯಲ್ಲಿ ನಾಲ್ವರ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದ್ದು ವಿಜಯವಾರ್ತೆಯ ನಿರಂತರ ವರದಿಗೆ ಫಲಶೃತಿ ಸಿಕ್ಕಿದೆ.
ಶೌಚಗುಂಡಿ ಸ್ವಚ್ಚಗೊಳಿಸುವಂತೆ 2023 ರಿಂದಲೂ ಕೆಎಸ್ ಆರ್ ಟಿಸಿಗೆ ನೋಟೀಸ್.
ಶೌಚಾಲಯದ ಗುಂಡಿ ತುಂಬಿ ಹರಿದಿರುವ ಬಗ್ಗೆ ಸ್ಪಷ್ಟೀಕರಣ ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಕೆಎಸ್ ಆರ್ ಟಿಸಿ ಅಧಿಕಾರಿಗಳ ನಿಜಬಣ್ಣ ಬಯಲಾಗಿದೆ. ಶೌಚಾಲಯದ ಗುಂಡಿ ತುಂಬಿ ಹರಿಯುವ ನೀರನ್ನ ಪೈಪ್ ಮೂಲಕ ಚರಂಡಿಗೆ ಹರಿಬಿಡಲಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಕೂಡಲೇ ಪಿಟ್ ಸ್ವಚ್ಚಗೊಳಿಸುವಂತೆ 2023 ನವೆಂಬರ್ 11 ರಂದು ಪಟ್ಟಣ ಪಂಚಾಯಿತಿ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ನೋಟೀಸ್ ನೀಡಿದೆ. ಆದರೆ ಈವರೆಗೂ ಸ್ವಚ್ಚಮಾಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಅಕ್ಟೋಬರ್ 24, 2024 ರಂದು ಮತ್ತೆ ನೋಟೀಸ್ ನೀಡಿರುವುದು ಬೆಳಕಿಗೆ ಬಂದಿದೆ. ಇಷ್ಟಾದರೂ ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಚರಂಡಿ ನೀರು ಹರಿದು ಪಾಚಿಕಟ್ಟಿದೆ, ನಮಗೆ ಸಂಬಂಧವೇ ಇಲ್ಲಾ ಎಂದು ಪ್ರಕರಣವನ್ನ ಮುಚ್ಚಿಹಾಕಲು ಯತ್ನಿಸಿದ್ದರು. ಕೆಎಸ್ಆರ್ಟಿಸಿ ಅಧಿಕಾರಿಗಳ ಮುಖವಾಡ ಕಳಚಿದ್ದು ಪಟ್ಟಣ ಪಂಚಾಯಿತಿ ನೊಟೀಸ್ ಗಳಲ್ಲೇ ಜಗಜ್ಜಾಹೀರಾಗಿದೆ.
ಅನಿಷ್ಠ ಪದ್ದತಿ ನಿರ್ಮೂಲಗೆ ಸ್ಪಪ್ರತಿಷ್ಠೆ ಬಿಟ್ಟು ಮಾನವೀಯತೆಯಿಂದ ಯೋಚಿಸಿ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿನಿಧಿಸುವ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ದಲಿತ ಬಾಲಕ ಹಾಗೂ ವಯಸ್ಕ ವ್ಯಕ್ತಿಯಿಂದ ಬರಿಗೈಲಿ ಮಲ ಸ್ವಚ್ಚಗೊಳಿಸಿದ ಪ್ರಕರಣ ಇಡೀ ನಾಗರೀಕ ಸಮಾಜವನ್ನೆ ತಲೆ ತಗ್ಗಿಸುವಂತೆ ಮಾಡಿದೆ. ಈ ಪ್ರಕರಣ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಕೆಲ ಅಧಿಕಾರಿಗಳು ಮುಚ್ಚಿಹಾಕಲು ಎಷ್ಟೇ ಪ್ರಯತ್ನಿಸಿದರು ಸಂವಿಧಾನ ಹಾಗೂ ಕಾನೂನಿನ ಮುಂದೆ ಸಾಧ್ಯವಾಗಿಲ್ಲ. ಇಂತಹ ಪ್ರಕರಣಗಳನ್ನ ಸ್ವಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಮಾನವೀಯತೆಯಿಂದ ಯೋಚಿಸಿ ಅನಿಷ್ಠ ಪದ್ದತಿಯ ನಿರ್ಮೂಲಗೆ ಎಲ್ಲರೂ ಕೈಜೋಡಿಸುವ ಕೆಲಸವಾಗಬೇಕಿದೆ.