ತುಮಕೂರು: ದಲಿತರಿಂದ ಬರಿಗೈಯಲ್ಲಿ ಮಲ ಸ್ವಚ್ಚಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಫಾಯಿ ಕರ್ಮಚಾರಿಗಳ ಆಯೋಗ ಘಟನೆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಆಯೋಗದ ಸೂಚನೆ ಬೆನ್ನಲ್ಲೆ ಕೊರಟಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಶುಕ್ರವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವೆಂಬರ್ 06 ರಂದು ಕೊರಟಗೆರೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಪಿಟ್ ತುಂಬಿ ಹೊರಬಂದಿದ್ದ ಮಲವನ್ನ ದಲಿತರಿಂದ ಬರಿಗೈಯಲ್ಲಿ ಸ್ವಚ್ಚಗೊಳಿಸಿದ್ದರು. ಈ ಬಗ್ಗೆ ವಿಜಯವಾರ್ತೆ.ಕಾಂ ದೃಶ್ಯ ಸಮೇತ ವರದಿ ಪ್ರಕಟಿಸಿತ್ತು. ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಅನಿಷ್ಠ ಪದ್ದತಿಯ ಬಗ್ಗೆ ಎಲ್ಲಾ ಪತ್ರಿಕಾ ಹಾಗೂ ದೃಷ್ಯ ಮಾಧ್ಯಮಗಳು ಸಹ ಸುದ್ದಿಯನ್ನ ಬಿತ್ತರಿಸಿದ್ದವು. ಗೃಹ ಸಚಿವರ ಕ್ಷೇತ್ರದಲ್ಲೆ ಮಲ ಹೊರುವ ಪದ್ದತಿ ಆಚರಣೆ ನಡೆದಿರುವುದು ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೆ ಸೃಷ್ಟಿಸಿದೆ. ಈ ಬಗ್ಗೆ ಹಲವಾರು ಸಂಘಟನೆಗಳು, ನಾಗರೀಕರು ಘಟನೆಯನ್ನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾರ್ತೆ ವರದಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ.
ಇನ್ನೂ ವಿಜಯವಾರ್ತೆ ವರದಿಗೆ ಸ್ಪಂದಿಸಿ ತನ್ನ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಯವರಿಂದ ತುಮಕೂರು ಜಿಲ್ಲಾಧಿಕಾರಿ, ಮಧಗಿರಿ ಉಪವಿಭಾಗಧಿಕಾರಿ ಹಾಗೂ ಕೊರಟಗೆರೆ ತಹಶಿಲ್ದಾರ್ ರವರಿಗೆ ಎಂಎಸ್ ಕಾಯ್ದೆ ಅನ್ವಯ ಕ್ರಮ ಕೈಗೊಂಡು ಆಯೋಗಕ್ಕೆ ತುರ್ತಾಗಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಕಾಟಚಾರಕ್ಕೆ ಎಂಬಂತೆ ಸ್ಪಷ್ಟೀಕರಣ ನೀಡುವ ಮೂಲಕ ಮಲ ಸ್ವಚ್ಚಗೊಳಿಸಿದ ದಲಿತ ಕಾರ್ಮಿಕರನ್ನ ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದಾರೆ, ಇದಕ್ಕೂ ನಮಗೂ ಸಂಬಂಧವೇ ಇಲ್ಲಾ ಎಂದು ಪ್ರಕರಣವನ್ನ ಮುಚ್ಚಿಹಾಕುವ ಯತ್ನ ನಡೆಸಿದ್ದರು. ಅಧಿಕಾರಿಗಳ ಕಾಟಾಚಾರದ ಸ್ಪಷ್ಟೀಕರಣವನ್ನ ದಿಟ್ಟವಾಗಿಯೇ ವಿರೋಧಿಸಿದ ವಿಜಯವಾರ್ತೆ ಸುದ್ದಿ ಮಾಧ್ಯಮ ಕೂಲಂಕಷವಾಗಿ ತನಿಖೆ ನಡೆಸುವಂತೆ ವರದಿಯನ್ನ ಬಿತ್ತರಿಸಲಾಗಿತ್ತು. ಇದರ ಜೊತೆಗೆ ಸಫಾಯಿ ಕರ್ಮಚಾರಿ ಆಯೋಗ ಜಿಲ್ಲಾಧಿಕಾರಿಗೆ ಸ್ಥಳಪರಿಶೀಲನೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದೆ. ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಸೂಚನೆ ಮೆರೆಗೆ ಸಮಾಜ ಕಲ್ಯಾಣಾ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ಕೊರಟಗೆರೆ ತಹಶಿಲ್ದಾರ್ ಮಂಜುನಾಥ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಮಾದ್ಯಗಳೊಂದಿಗೆ ಮಾತನಾಡಿರುವ ಸಮಾಜ ಕಲ್ಯಾಣಾ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಶೌಚಾಲಯದ ಪಿಟ್ ತುಂಬಿ ಹೊರಗೆ ಹರಿದಿರುವುದನ್ನ ಖಚಿತಪಡಿಸಿದ್ದು ಈ ಬಗ್ಗೆ ತಪ್ಪಿತಸ್ಥರ ವಿರುದ್ದ ಪಟ್ಟಣ ಪಂಚಾಯ್ತಿಯವರು ದೂರು ದಾಖಲು ಮಾಡಲಿದ್ದಾರೆ. ಎಫ್ ಐ ಆರ್ ಆದ ತಕ್ಷಣ ಮುಂದಿನ ಕಾನೂನು ಕ್ರಮ ವಹಿಸುತ್ತೇವೆ. ಜೊತೆಗೆ ಪಟ್ಟಣ ಪಂಚಾಯ್ತಿಯವರು ಈ ಹಿಂದೆಯೇ ಶೌಚಾಲಯದ ಪಿಟ್ ತುಂಬಿ ಹೊರಗೆ ಹರಿದಿರುವುದನ್ನ ಸ್ವಚ್ಚಗೊಳಿಸುವಂತೆ ನೋಟಿಸ್ ನೀಡಿದ್ದರೂ ನಮ್ಮ ಗಮನಕ್ಕೆ ತರದೆ ಇಂತಹ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಪಟ್ಟಣ ಪಂಚಾಯ್ತಿಯಲ್ಲಿ ಇರುವ ಸೆಪ್ಟಿಕ್ ಟ್ಯಾಂಕ್ ಬಳಸುವಂತೆ ಅರಿವು ಮೂಡಿಸಿದ್ದರೂ ಸಹ ಕಾನೂನು ಉಲ್ಲಂಘನೆ ಮಾಡಲಾಗಿದೆ. ಕೆಎಸ್ಆರ್ ಟಿಸಿ ನಿಲ್ದಾಣಾ ನಿಯಂತ್ರಣಾಧಿಕಾರಿ ಹಾಗೂ ಶೌಚಾಲಯದ ನಿರ್ವಹಣೆಯ ಗುತ್ತಿಗೆದಾರನ ವಿರುದ್ದ ದೂರು ದಾಖಲಾಗಲಿದೆ ಎಂದರು.
ಮಾಧ್ಯಮದವರೇ ಕಾರ್ಮಿಕರನ್ನ ಕರೆತಂದು ವಿಡಿಯೋ ಮಾಡಿದ್ದಾರೆ ಎಂದ ಟಿಸಿಗೆ ಕ್ಲಾಸ್.
ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ನಿಲ್ದಾಣದ ಟಿಸಿ ಮಾದ್ಯಮದವರೇ ಕಾರ್ಮಿಕರನ್ನ ಕರೆತಂದು ಕೆಲಸ ಮಾಡಿಸಿ ವಿಡಿಯೋ ಮಾಡಿದ್ದಾರೆ ಎಂದು ಉದ್ದಟತನದ ಹೇಳಿಕೆ ನೀಡಿದ್ದು ಸ್ಥಳದಲ್ಲೇ ಇದ್ದ ಸ್ಥಳೀಯ ಪತ್ರಿಕಾ ಮಾಧ್ಯಮದ ವರದಿಗಾರರು ಹಾಗೂ ಸಂಘಟನೆಗಳ ಮುಖಂಡರು ಟಿಸಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಬಾಲಕರ್ಮಿಕ ಪದ್ದತಿಯೂ ಕೂಡ ಮಲ ಹೊರುವ ಪದ್ದತಿ ಯಷ್ಟೇ ಗಂಭೀರವಾದ ಪ್ರಕರಣವಾಗಿದ್ದು ಈ ಪ್ರಕರಣವನ್ನ ಮುಚ್ಚಿಹಾಕಲು ಬೇರೊಬ್ಬ ವಯಸ್ಕ ಯುವಕನನ್ನು ತೋರಿಸಿ ಪ್ರಕರಣವನ್ನೇ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದರು ಎನ್ನುವುದು ತಿಳಿದು ಬಂದಿದೆ.
ರಾಜ್ಯದಲ್ಲಿ ಮಲ ಹೊರುವ ಪದ್ದತಿ ಪ್ರಕರಣಗಳು ಮರುಕಳಿಸುತ್ತಿರುವ ಕುರಿತಂತೆ ಹಾಗೂ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ ಎಂದು ಈ ಹಿಂದೆ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಆದರೂ ಸಹ ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವುದಕ್ಕೆ ಗೃಹ ಸಚಿವರ ತವರಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಬಡವರು, ದೀನ ದಲಿತರಿಗೆ ನ್ಯಾಯ ಒದಗಿಸಿ ಕೊಡುವಲ್ಲಿ ಅಧಿಕಾರಿಗಳು, ಜನಪ್ರತಿನಿದಿಗಳು ಹೃದಯ ಶ್ರೀಮಂತಿಕೆ ಮೆರೆಯಬೇಕಿದೆ.
ವರದಿ: ಮಂಜುನಾಥ ಜಿ ಎನ್. ತುಮಕೂರು.