ವರದಿ: ಮಂಜುನಾಥ್ ಜಿ ಎನ್, ತುಮಕೂರು.
ತುಮಕೂರು: ಕೊರಟಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ದಲಿತರಿಂದ ಮಲ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಧಿಸಿದಂತೆ ಸ್ಪಷ್ಟನೆ ಕೊಡುವ ಭರದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳು ಮಲ ಸ್ವಚ್ಚಗೊಳಿಸಿದ ದಲಿತ ಕಾರ್ಮಿಕನಿಗೆ ಮಾನಸಿಕ ಅಸ್ವಸ್ಥನೆಂಬ ಪಟ್ಟಕಟ್ಟುವ ಮೂಲಕ ಮತ್ತೊಂದು ಯಡವಟ್ಟು ಮಾಡಿದ್ದಾರೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ವಕ್ಷೇತ್ರ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ದಲಿತ ಬಾಲಕಾರ್ಮಿಕ ಹಾಗೂ ವ್ಯಕ್ತಿಯಿಂದ ಮಲ ಸ್ವಚ್ಚಗೊಳಿಸಿದ ಬಗ್ಗೆ ವಿಜಯವಾರ್ತೆ.ಕಾಂ ವೆಬ್ ಸೈಟ್ ಹಾಗೂ ಯೂಟ್ಯೂಬ್ ನಲ್ಲಿ ದೃಶ್ಯ ಸಮೇತ ವರದಿ ಮಾಡಲಾಗಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಕೆಎಸ್ ಆರ್ ಟಿಸಿ ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚಿಕೊಳ್ಳುವ ಭರದಲ್ಲಿ ಮಲ ಸ್ವಚ್ಚಗೊಳಿಸಿದ ದಲಿತ ಕಾರ್ಮಿಕನಿಗೆ ಮಾನಸಿಕ ಅಸ್ವಸ್ಥ ಎಂಬ ಅಣೆಪಟ್ಟಿ ನೀಡಿ ಪ್ರಕರಣವನ್ನ ಮುಚ್ಚಿಹಾಕುವ ಯತ್ನ ನಡೆಸಿರುವುದು ಸ್ಪಷ್ಟೀಕರಣದಲ್ಲೆ ಎದ್ದುಕಾಣುತ್ತಿದೆ.
ಕೆಎಸ್ ಆರ್ ಟಿಸಿ ಅಧಿಕಾರಿಗಳ ಸ್ಪಷ್ಟನೇ ಏನು..?
ಬಸ್ ನಿಲ್ದಾಣದ ದಕ್ಷಿಣ ದಿಕ್ಕಿನ ಮೂಲೆಯಲ್ಲಿ ಎತ್ತರದ ಪ್ರದೇಶ ದಲ್ಲಿರುವ ಶೌಚಾಲಯವನ್ನು ಉನ್ನತಿಕರಿಸಲಾಗಿದೆ, ಇದರಿಂದ ಯಾವುದೇ ರೀತಿಯಲ್ಲೂ ಮಲ ಹೊರಬರಲು ಸಾಧ್ಯವಿಲ್ಲ. ಜೊತೆಗೆ ಇದರ ನಿರ್ವಹಣೆಯನ್ನ ಟೆಂಡರ್ ಪ್ರಕ್ರಿಯೆ ಮೂಲಕ ಲಕ್ಷ್ಮೀ ಎಂಟರ್ ಪ್ರೈಸಸ್ ರವರಿಗೆ ನೀಡಲಾಗಿದೆ. ಶೌಚಾಲಯದ ನಿರ್ವಹಣೆಗೂ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ ಇದು ಸತ್ಯಕ್ಕೆ ದೂರವಾದದ್ದು. ಅಲ್ಲದೆ ವಿಡಿಯೋದಲ್ಲಿರುವ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿರುತ್ತಾನೆ ಎಂದು ಸಷ್ಟೀಕರಣ ನೀಡಿದ್ದಾರೆ.
ವಾಸ್ತವ ಏನು..?
ಆದರೆ ವಾಸ್ತವಾಗಿ ಅಧಿಕಾರಿಗಳು ಪ್ರಕರಣದ ದಿಕ್ಕು ತಪ್ಪಿಸುವ ಉನ್ನಾರ ನಡೆಸಿರುವುದು ಮೇಲ್ನೊಟಕ್ಕೆ ಎದ್ದು ಕಾಣುತ್ತಿದೆ. ಮಳೆ ನೀರು ಶೇಖರಣೆಯಾಗಿ ಪಾಚಿಕಟ್ಟಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಅದನ್ನು ಸ್ವಚ್ಚಗೊಳಿಸಿದ ಬಾಲಕ ತಾನು ಸ್ವಚ್ಛಗೊಳಿಸುತ್ತಿರುವುದು ಶೌಚಾಲಯದ ಗುಂಡಿಯಿಂದ ಹೊರಬಂದ ಮಲ ಎಂದು ಒಪ್ಪಿಕೊಂಡಿದ್ದಾನೆ. ಇದನ್ನ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿದ ಬಗ್ಗೆ ಸ್ಷಷ್ಟನೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಜೊತೆಗೆ ಅಧಿಕಾರಿಗಳೇ ಸ್ಪಷ್ಟೀಕರಣ ನೀಡಿರುವಂತೆ ಸದರಿ ದಿನ ಸ್ವಚ್ಚಗೊಳಿಸಿದ ಕಾರ್ಮಿಕರು ಎಂದು ಉಲ್ಲೇಖಿಸಿರುವುದು ಬಾಲಕಾರ್ಮಿಕನಿಂದ ಕೆಲಸ ಮಾಡಿಸಿರುವುದು ಒಪ್ಪಿಕೊಂಡಂತೆ ಅರ್ಥೈಸಿದೆ. ಮತ್ತೊಂದೆಡೆ ದಲಿತ ಕಾರ್ಮಿಕನನ್ನು ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದಿದ್ದಾರೆ. ಓರ್ವ ಬಾಲಕಾರ್ಮಿಕ ಹಾಗೂ ಮಾನಸಿಕ ಅಸ್ವಸ್ಥನಿಂದ ಕೆಲಸ ಮಾಡಿಸಿದ್ದು ಎಷ್ಟು ಸರಿ, ಇದು ಕಾನೂನು ಬಾಹಿರವಲ್ಲವೇ ಎಂಬುದನ್ನ ಅಧಿಕಾರಿಗಳೇ ಸ್ಪಷ್ಟಪಡಿಸಬೇಕಿದೆ.
ಅಷ್ಟೇ ಅಲ್ಲದೆ ಈ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಏನೆಲ್ಲಾ ಪರಿಶೀಲನೆ ಹಾಗೂ ತನಿಖೆ ನಡೆಸಲಾಗಿದೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಆ ಬಾಲಕಾರ್ಮಿಕ ಹಾಗೂ ವ್ಯಕ್ತಿಯನ್ನ ಭೇಟಿಯಾಗಿ ಮಾಹಿತಿ ಪಡೆದಿದ್ದಾರೆಯೇ, ಘಟನೆಯ ತನಿಖಾ ವರದಿ ಏನಿದೆ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗು ಮಾಹಿತಿ ನೀಡಿಲ್ಲ. ಆದರೆ ಕೆಎಸ್ ಆರ್ ಟಿ ಸಿ ಅಧಿಕಾರಿಗಳು ನೀಡಿರುವ ಸ್ಪಷ್ಟೀಕರಣ ದಲ್ಲೂ ಸಹ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಅಸಹಾಯಕ ದಲಿತರನ್ನ ಮಲ ಸ್ವಚ್ಚಗೊಳಿಸಲು ಬಳಸಿಕೊಂಡಿದ್ದಲ್ಲದೆ, ತನಿಖೆಯನ್ನೆ ಮಾಡದೇ ಅವರ ಕೊಳಕಾದ ಬಟ್ಟೆ, ಶ್ರಮದಿಂದ ಬಾಡಿದ ಮುಖವನ್ನ ಕಂಡ ಅಧಿಕಾರಿಗಳು ದಲಿತರಿಗೆ ಮಾನಸಿಕ ಅಸ್ವಸ್ಥರಂತೆ ನೋಡಿದ್ದು ಮಾತ್ರ ನಿಜಕ್ಕೂ ದುರಂತ. ಇನ್ನಾದರೂ ಈ ಘಟನೆ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನ ಕಾದು ನೋಡಬೇಕಿದೆ.