ತುಮಕೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ರೂಪದ ಡ್ರಗ್ ಹುಟ್ಟಿಕೊಂಡಿದೆ ಇದನ್ನ ನಾವು ತಡೆಗಟ್ಟದೆ ಇದ್ದರೆ ಎಲ್ಲೆಡೆ ವ್ಯಾಪಿಸುತ್ತದೆ ಎಂದು ನಟ ದುನಿಯಾ ವಿಜಯ್ ಆತಂಕ ವ್ಯಕ್ತ ಪಡಿಸಿದ್ದಾರೆ.
ಭೀಮ ಚಿತ್ರದ ರಿಲೀಸ್ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ನಟ ದುನಿಯಾ ವಿಜಯ್ ಅವರು ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶಿರ್ವಾದ ಪಡೆದರು. ಬಳಿಕ ಶ್ರೀಗಳ ಜೊತೆ ಮಾತನಾಡುತ್ತಾ ಗುರುಗಳೇ ಬೆಂಗಳೂರಿನಲ್ಲಿ ಹೊಸ ರೀತಿಯ ಡ್ರಗ್ ಹುಟ್ಟಿಕೊಂಡಿದೆ, ಅದನ್ನ ನಾನು ಪತ್ತೆ ಮಾಡಿದ್ದೇನೆ, ಇದನ್ನ ನಾವು ತಡೆಗಟ್ಟದೇ ಇದ್ದರೆ ಎಲ್ಲಾ ಕಡೆ ವ್ಯಾಪಿಸುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಈ ಡ್ರಗ್ಸ್ ಹೊಸದಾಗಿ ಅವರವರೇ ಕಂಡು ಹಿಡಿದುಕೊಂಡು ಶುರುಮಾಡಿಬಿಡ್ತಾರೆ ಎಂದರು, ತಡೆಗಟ್ಟದೆ ಇದ್ದಲ್ಲಿ ಕರ್ನಾಟಕದಾದ್ಯಂತ ಹರಡಿಕೊಳ್ಳುತ್ತದೆ ಎಂದರು. ಈ ಕುರಿತು ತಮ್ಮ ಮೊಬೈಲ್ ನಲ್ಲಿದ್ದ ಕೆಲ ವಿಷಯಗಳನ್ನ ಗೌಪ್ಯವಾಗಿ ಶ್ರೀಗಳಿಗೆ ತೋರಿಸಿ ಡ್ರಗ್ ಪರಿಣಾಮದ ಕುರಿತು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದಲಿಂಗ ಶ್ರೀಗಳು ಸಿನಿಮಾದವರೆಲ್ಲರೂ ಮನಸು ಮಾಡಿದರೆ ಇದರ ನಿಯಂತ್ರಣ ಸಾಧ್ಯ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನಟ ವಿಜಯ್ ಆ.9 ರಂದು ಭೀಮ ಚಿತ್ರ ರಿಲೀಸ್ ಆಗುತ್ತಿದೆ, ರಾಜ್ಯದಲ್ಲಿ ಮಕ್ಕಳು ಮಾದಕ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಭೀಮ ಚಿತ್ರ ಮಾಡಲಾಗಿದೆ.ಬೆಂಗಳೂರಿನಲ್ಲಿ ಹುಟ್ಟಿಕೊಂಡಿರುವ ಹೊಸ ರೀತಿಯ ಮಾದಕ ಅಂಶ ಎಲ್ಲಾ ತಾಲ್ಲೂಕುಗಳಿಗೆ ವ್ಯಾಪಿಸುತ್ತಿದೆ, ಇದನ್ನ ತಡೆಗಟ್ಟಬೇಕಾದ್ದು ನಮ್ಮೆಲ್ಲರ ಕರ್ತವ್ಯ, ಈ ಬಗ್ಗೆ ಶ್ರೀಗಳಿಗೂ ಕೇಳಿಕೊಂಡಿದ್ದೇನೆ ಅವರು ಒಪ್ಪಿಕೊಂಡು ಆಶಿರ್ವಾದ ಮಾಡಿದ್ದಾರೆ ಎಂದರು.