ತುಮಕೂರು: ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗಳ ಅಂಗಾಂಗಗಳನ್ನ ದಾನ ಮಾಡುವ ಮೂಲಕ ಮಗಳ ಸಾವಿನಲ್ಲೂ ಪೋಷಕರು ಸಾರ್ಥಕತೆಯನ್ನ ಮೆರೆದ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ.
ನಗರದ ಹಳೆ ಪಾಳ್ಯ ನಿವಾಸಿ ವಸಂತಕುಮಾರ್, ದಿವ್ಯಾ ದಂಪತಿಯ ಮಗಳು ಚಂದನಾ(12)ಗೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯ ಗೊಂಡಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಚಂದನಾ ಅವರ ಅಂಗಾಂಗಗಳನ್ನ ಫೋಷಕರು ದಾನ ಮಾಡಿ 6 ಮಕ್ಕಳಿಗೆ ಪುನರ್ಜನ್ಮ ನೀಡಿದ್ದಾರೆ.
ನಗರದ ಪ್ರತಿಷ್ಠಿತ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಚಂದನಾ ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಯಮಸ್ವರೂಪಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಚಂದನಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ವೈದ್ಯಕೀಯ ಕಾಲೇಜ್ ಗೆ ದಾಖಲಿಸಲಾಗಿತ್ತು. ಸತತ 7 ದಿನಗಳ ಚಿಕಿತ್ಸೆ ನಂತರ ಚಿಕಿತ್ಸೆ ಫಲಕಾರಿಯಾಗದೆ ಜು.29 ರಂದು ಮೆದುಳು ನಿಷ್ಕ್ರಿಯಗೊಂಡಿದೆ. ಮಗಳು ಬದುಕುವ ಸಾಧ್ಯತೆ ಇಲ್ಲಾ ಎಂದು ತಿಳಿದ ವಿದ್ಯಾರ್ಥಿನಿ ತಂದೆ ವಸಂತ್ ಕುಮಾರ್ ತಾಯಿ ದಿವ್ಯಾ ಮಗಳು ಚಂದನಾಳ ಅಂಗಾಗಗಳನ್ನ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ವಿದ್ಯಾರ್ಥಿನಿ ಚಂದನಾಳ ಕಣ್ಣು, ಕಿಡ್ನಿ, ಹೃದಯ, ಸೇರಿದಂತೆ ಬಹು ಅಂಗಾಗಗಳನ್ನ 6 ಜನ ಮಕ್ಕಳಿಗೆ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ವಿದ್ಯಾರ್ಥಿನಿ ಚಂದನ ಸಾವಿಗೆ ಇಡೀ ಕಲ್ಪತರು ನಾಡು ತಿಪಟೂರು ಕಂಬನಿ ಮಿಡಿದಿದೆ. ಚಂದನಳಾ ಮೃತ ದೇಹವನ್ನ ಹಾಸನ ಆಸ್ಪತ್ರೆಯಿಂದ ಹೊರಟು ತಿಪಟೂರಿಗೆ ಆಗಮಿಸುತ್ತಿದ್ದಂತೆ ಜನರು ಅಂತಿಮ ದರ್ಶನ ಪಡೆಯಲು ಮುಗಿಬಿದ್ದರು. ನಗರದ ಹಾಸನ ವೃತ್ತದಿಂದ ನಗರ ಪ್ರಮುಖ ರಸ್ತೆಯಲ್ಲಿ ಚಂದನ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು.ಇದೇ ವೇಳೆ ಚಂದನಾ ಮೃತ ದೇಹಕ್ಕೆ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ , ನೇತೃತ್ವದಲ್ಲಿ ತಾಲ್ಲೋಕು ಆಡಳಿತದಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್, ನಿವೃತ್ತಪೊಲೀಸ್ ಅಧಿಕಾರಿ ಲೊಕೇಶ್ವರ್ .ಖ್ಯಾತವೈದ್ಯರಾದ ಡಾ.ಶ್ರೀಧರ್, ಡಾ.ವಿವೇಚನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಡೇನೂರು ಕಾಂತರಾಜು ಶ್ರೀವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯಸ್ಥ ಕೇಶವ. ತಹಸೀಲ್ದಾರ್ ಪವನ್ ಕುಮಾರ್, ಇಒ ಸುದರ್ಶನ್, ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಸೇರಿದಂತೆ ಹಲವರು ಮೃತ ಚಂದನಾಳ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ನಂತರ ಚಂದನಾ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರೀವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯ ನೂರಾರು ಶಾಲೆಯ ವಿದ್ಯಾರ್ಥಿ ಗಳು, ಸಹಪಾಠಿಗಳು ಚಂದನಾ ಪಾರ್ಥಿವ ಶರೀರಕ್ಕೆ ಶ್ರದಾಂಜಲಿ ಸಲ್ಲಿಸಿ ಕಣ್ಣೀರಿಟ್ಟರು. ಬಳಿಕ ವಿದ್ಯಾರ್ಥಿನಿ ಸ್ವಗ್ರಾಮ ಹಳೇಪಾಳ್ಯದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಶವಸಂಸ್ಕಾರ ನೆರವೇರಿಸಲಾಯಿತು.