ತುಮಕೂರು: ವಾಲ್ಮೀಕಿ ಅಭಿವೃಧ್ದಿ ನಿಗಮದ ಹಗರಣಕ್ಕೆ ಸಂಬಂದಿಸಿದಂತೆ ಶಾಸಕ ನಾಗೇಂದ್ರ ಅವರು ಬಿಜೆಪಿ-ಜೆಡಿಎಸ್ ನಾಯಕರ ರೀತಿ ತಲೆಮರೆಸಿಕೊಂಡು ಓಡಾಡುತ್ತಿಲ್ಲ. ಖುದ್ದಾಗಿ ತನಿಖೆಗೆ ಹಾಜರಾಗುತ್ತಿದ್ದಾರೆ”ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಮಂತ್ರಿಯಾಗಿದ್ದ ನಾಗೇಂದ್ರ ಅವರೇ, ವಾಲ್ಮೀಕಿ ಅಭಿವೃದ್ಧಿ ನಿಗಮದ ತನಿಖೆ ಆಗಬೇಕು ಎಂದು ಎಸ್‌ಐಟಿ ರಚನೆಗೆ ಶಿಫಾರಸ್ಸು ಮಾಡಿದ್ದಾರೆ. ಎಸ್‌ಐಟಿಯೂ ರಚನೆಯಾಗಿದೆ. ರಾಜೀನಾಮೆಯನ್ನೂ ನೀಡಿದ್ದಾರೆ. ನಿನ್ನೆ ಬಂದ ಆಡಿಯೋ ನೋಡಿದರೆ, ಅದರಲ್ಲೆ ಅಧಿಕಾರಿಗಳು ನಿಗಮದ ಅಧ್ಯಕ್ಷರಿಗೆ ಗೊತ್ತಾದರೆ ದೊಡ್ಡ ರಾದ್ದಾಂತವಾಗುತ್ತದೆ ಎಂದು ಹೇಳಿರುವುದು ಸ್ವಷ್ಟವಾಗಿದೆ. ಯಾರು ಅಧಿಕಾರಿಗಳು ತಪ್ಪುಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿದೆ. ಶಾಸಕ ನಾಗೇಂದ್ರ ಅವರು ಬಿಜೆಪಿ ಜೆಡಿಎಸ್ ನಾಯಕರ ರೀತಿ ತಲೆಮರೆಸಿಕೊಂಡು ಓಡಾಡುತ್ತಿಲ್ಲ. ತನಿಖೆಗೆ ಹಾಜರಾಗುತ್ತಿದ್ದಾರೆ” ಎಂದರು.
ಮೋದಿ ಬಲ ಕುಗ್ಗಿದೆ, ಇಡಿ ದಾಳಿ ವಿಳಂಬವಾಗಿದೆ.
ವಿರೋಧ ಪಕ್ಷಗಳ ಮೇಲೆ ನಡೆಯುವ ಐಟಿ ಮತ್ತು ಇಡಿ ದಾಳಿ ಆಶ್ಚರ್ಯವೇನಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ಬಲ ಕುಸಿತಗೊಂಡ ಪರಿಣಾಮ ವಾಲ್ಮೀಕಿ ಹಗರಣದ ಇಡಿ ದಾಳಿ ವಿಳಂಬವಾಗಿದೆ” ಕಾಂಗ್ರೆಸ್ ನಾಯಕರನ್ನು, ವಿರೋಧ ಪಕ್ಷಗಳನ್ನು ಕುಗ್ಗಿಸಲು ಐಟಿ-ಇಡಿ ದಾಳಿ ಮಾಡುತ್ತಾರೆ. ಹತ್ತು ವರ್ಷಗಳಿಂದಲೂ ಇದೇ ನಡೆದುಕೊಂಡು ಬಂದಿದೆ. ಇದರಲ್ಲೇನೂ ಅಶ್ಚರ್ಯವಿಲ್ಲ” ಎಂದರು.
ಮುಡಾ ಹಗರಣ ಆರೋಪ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ವಿರೋಧ ಪಕ್ಷದವರು ಆರೋಪ ಮಾಡುವುದು ಸಹಜ. ಆದರೆ ನಾವು ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಹಗರಣ, ಗಂಗಾಕಲ್ಯಾಣ ಹಗರಣಗಳ ಬಗ್ಗೆ ದಾಖಲೆ ನೀಡಿ ಮಾತನಾಡಿದ್ದೆವು. ಇವರು ಕೂಡ ದಾಖಲೆ ನೀಡಿ ಮಾತನಾಡಲಿ. ಮುಡಾ ಅಕ್ರಮದ ಬಗ್ಗೆ 2011ರಲ್ಲಿ ಬಿ.ಎಸ್.ಯಡಯೂರಪ್ಪ ಅವರು ಸ್ಪೀಕರ್‌ಗೆ ದೂರು ನೀಡಿದ್ದರು. ಆಗ ಬಿಜೆಪಿಗೆ ಅಕ್ರಮ ನಡೆಯುತ್ತಿರುವುದು ಗೊತ್ತಿತ್ತಲ್ಲ. ಯಾಕೆ ತನಿಖೆ ಮಾಡಲಿಲ್ಲ, ಯಾಕೆ ಸುಮ್ಮನಿದ್ದರು” ಎಂದು ಪ್ರಶ್ನಿಸಿದ್ದಾರೆ.
ಈಗ ಸಚಿವ ಭೈರತಿ ಸುರೇಶ್ ಅವರು ಈ ಎಲ್ಲವನ್ನೂ ನಿಲ್ಲಿಸಿ ತನಿಖೆ ಮಾಡಿಸುತ್ತಿದ್ದಾರೆ. ಇದನ್ನು ಮಾಡುತ್ತಿರುವುದು ತಪ್ಪಾ?” ಎಂದು ಪ್ರಶ್ನಿಸಿದ ಅವರು, “ಮುಖ್ಯಮಂತ್ರಿಗಳು ಮತ್ತು ಅವರ ಕಾನೂನು ಸಲಹೆಗಾರರು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲ ಕಾನೂನು ರೀತಿಯೇ ತೆಗೆದುಕೊಂಡಿರುವುದನ್ನು ತೆರೆದಿಟ್ಟಿದ್ದಾರೆ” ಎಂದರು.