ಬೆಲೆ ಹೆಚ್ಚಳದಿಂದ ಕೇಂದ್ರ ಸಂಗ್ರಹಿಸಿರುವ 4 ಲಕ್ಷ ಕೋಟಿಯನ್ನು ರಾಜ್ಯಗಳಿಗೆ ಹಂಚಬೇಕು: ಮಮತಾ ಬ್ಯಾನರ್ಜಿ

ಇಂಧನ ಬೆಲೆ ಹೆಚ್ಚಳದಿಂದ ಕೇಂದ್ರ ಸರ್ಕಾರವು ಇತ್ತೀಚಿನ ದಿನಗಳಲ್ಲಿ 4 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಹಣವನ್ನು ರಾಜ್ಯಗಳಿಗೆ ಸಮಾನವಾಗಿ ವಿತರಿಸಬೇಕು ಎಂದು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ ಎಂದು ಅಸೆಂಬ್ಲಿ ಅಧಿವೇಶನದಲ್ಲಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

” ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ, ತೆರಿಗೆಯಿಂದ ಕೇಂದ್ರ ಸರ್ಕಾರ ಸುಮಾರು 4 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಈಗ ಬಿಜೆಪಿಯು ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಬೇಕೆಂದು ಬಯಸುತ್ತಿದೆ. ರಾಜ್ಯಗಳು ಹಣವನ್ನು ಎಲ್ಲಿಂದ ತರುತ್ತವೆ? ಕೇಂದ್ರ ಸರ್ಕಾರ ಸಂಗ್ರಹಿಸಿರುವ 4 ಲಕ್ಷ ಕೋಟಿ ರೂಪಾಯಿಯನ್ನು ರಾಜ್ಯಗಳಿಗೆ ಸಮಾನವಾಗಿ ವಿತರಿಸಬೇಕು. ಆರ್ಥಿಕ ಅಡಚಣೆಗಳ ನಡುವೆಯೂ ರಾಜ್ಯವು ಹಲವಾರು ಸಬ್ಸಿಡಿಗಳನ್ನು ನೀಡುತ್ತಿದೆ” ಎಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹೇಳಿದ್ದಾರೆ.

“ಚುನಾವಣೆ ಹತ್ತಿರ ಬಂದಾಗಲೆಲ್ಲಾ ಕೇಂದ್ರ ಸರ್ಕಾರ ಬೆಲೆ ಇಳಿಸುತ್ತದೆ. ಚುನಾವಣೆ ಮುಗಿದ ನಂತರ ಮತ್ತೆ ಬೆಲೆ ಹೆಚ್ಚಿಸುತ್ತಾರೆ. ತೈಲ ಬೆಲೆಗಳ ಬಗ್ಗೆ ನಮಗೆ ಉಪನ್ಯಾಸ ನೀಡುವವರು ಮೊದಲು ರಾಜ್ಯ ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಉತ್ತರಿಸಬೇಕು. ಕೇಂದ್ರ ಸರ್ಕಾರ ನಮಗೆ ನೀಡಬೇಕಾದ ಬಾಕಿ ಹಣವನ್ನು ನೀಡುತ್ತಿಲ್ಲ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಗಳ ನಡುವೆ ಲಸಿಕೆಗಳ ವಿತರಣೆಯ ಸಮಯದಲ್ಲಿಯೂ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ವಿರುದ್ಧ ಮಲತಾಯಿಯ ಧೋರಣೆ ಅನುಸರಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

“ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ಹೋಲಿಸಿದರೆ ನಮಗೆ ನೀಡಿದ ಲಸಿಕೆಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಒಂದು ಲಸಿಕೆ ಡೋಸ್ ವ್ಯರ್ಥವಾಗದಂತೆ ನಾವು ಬಳಸಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಕಳೆದೊಂದು ವರ್ಷದಿಂದ ಹೆಚ್ಚಳವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಒಕ್ಕೂಟ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಮೇಲೆ 5 ರೂ ಮತ್ತು ಡೀಸೆಲ್ ಮೇಲೆ 10 ರೂ ಕಡಿತಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!