3 ಚಿನ್ನದ ಪದಕ ಪಡೆದು ತಂದೆ ಕನಸು ನನಸು ಮಾಡಿದ ವಿದ್ಯಾರ್ಥಿನಿ.

ತುಮಕೂರು: ಎಂಎಸ್ಸಿ ಗಣಿತ ವಿಭಾಗದಲ್ಲಿ 3 ಚಿನ್ನದ ಪದಕ ಗಳಿಸುವ ಮೂಲಕ ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ವಿದ್ಯಾಶ್ರೀ ಸಾಧನೆ ಮಾಡಿದ್ದು, ಇಂದು ನಡೆದ ಘಟಿಕೋತ್ಸವದಲ್ಲಿ ಪದಕ ಪ್ರದಾನ ಮಾಡಲಾಯಿತು.

ವಿದ್ಯಾಶ್ರೀ ಮೂರನೇ ತರಗತಿಯಲ್ಲಿರುವಾಗಲೇ ಈಕೆಯ ತಂದೆ ಹೃದಯಘಾತದಿಂದ ಮೃತಪಟ್ಟಿದ್ದರು. ತುಮಕೂರಿನ ಕಾಲೇಜೊಂದರಲ್ಲಿ ಗಣಿತ ಉಪನ್ಯಾಸಕರಾಗಿದ್ದ ತಂದೆಯ ಕನಸನ್ನು ನನಸು ಮಾಡುವ ಸಲುವಾಗಿ ಎಂಎಸ್ಸಿ ಗಣಿತ ವಿಭಾಗವನ್ನೇ ಆಯ್ದುಕೊಂಡ ವಿದ್ಯಾಶ್ರೀ ಚಿನ್ನದ ಪದಕ ಪಡೆಯುವ ಮೂಲಕ ತನ್ನ ಗುರಿ ಸಾಧಿಸಿದ್ದಾಳೆ.

ದ್ವಿತೀಯ ಪಿಯುಸಿಯಲ್ಲಿ ಶೇ. 91 ಅಂಕಗಳನ್ನು ಪಡೆದಿದ್ದ ವಿದ್ಯಾಶ್ರೀ, ಸಿಇಟಿಯಲ್ಲಿ ಉತ್ತಮ ರ್ಯಾಂಕಿಂಗ್​ ಪಡೆದಿದ್ದಳು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಕೂಡ ಬಿಎಸ್ಸಿ ವ್ಯಾಸಂಗ ಮಾಡಿ, ನಂತರ ಎಂಎಸ್ಸಿ ಗಣಿತಕ್ಕೆ ಸೇರಿಕೊಂಡಿದ್ದಳು. ಟೈಲರಿಂಗ್ ಕೆಲಸ ಮಾಡುತ್ತಿರುವ ತಾಯಿ, ತಂದೆ ಬಿಟ್ಟು ಹೋಗಿರುವ ಕೆಲಸವನ್ನು ಪೂರ್ಣಗೊಳಿಸುವಂತೆ ಸಲಹೆ ನೀಡಿದ್ದರು. ಅದರಂತೆ ನಾನು ಗಣಿತದಲ್ಲಿ ಸಾಧನೆ ಮಾಡಲು ಹೊರಟಿದ್ದೇನೆ ಎಂದು ಚಿನ್ನದ ಹುಡುಗಿ ವಿದ್ಯಾಶ್ರೀ ಹೇಳಿದ್ದಾಳೆ.

error: Content is protected !!