ಸ್ಥಗಿತಗೊಂಡಿದ್ದ ಹಜ್ ಯಾತ್ರೆಗೆ ಶೀಘ್ರ ಚಾಲನೆ, 2022ರ ಯಾತ್ರೆಗೆ ನೊಂದಣಿ ಪ್ರಕ್ರಿಯೆ ಆರಂಭ: ಶಶಿಕಲಾ ಜೊಲ್ಲೆ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಮುಸ್ಲಿಂ ಬಾಂಧವರ ಪವಿತ್ರ ಹಜ್ ಯಾತ್ರೆಗೆ ಈ ವರ್ಷದಿಂದ ಚಾಲನೆ ನೀಡಲಾಗಿದೆ ಎಂದು ರಾಜ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅ. ಜೊಲ್ಲೆ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಸಾಂಕ್ರಾಮಿಕ ಪ್ರಸರಣದ ಹಿನ್ನೆಲೆಯಲ್ಲಿ ಹಜ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ಪ್ರಸರಣ ತಗ್ಗಿರುವ ಹಿನ್ನೆಲೆಯಲ್ಲಿ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2022ರ ಹಜ್ ಯಾತ್ರೆ ಪ್ರಕ್ರಿಯೆ ಪೂರ್ಣ ಶೇ. 100ರಷ್ಟು ಆನ್‍ಲೈನ್‍ಗೊಳಿಸಲಾಗಿದೆ. ಇದೇ ನ. 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, 2022ರ ಜ.31ರಂದು ಕೊನೆಯ ದಿನಾಂಕವಾಗಿದೆ. ಯಾತ್ರಾರ್ಥಿಗಳು ‘ಹಜ್’ ಮೊಬೈಲ್ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿದಾರರು 2022ರ ಜನವರಿ 31ರ ಮೊದಲೇ ಪಾಸ್‍ಪೋರ್ಟ್ ಪಡೆದಿರಬೇಕು. 2022ರ ಡಿಸೆಂಬರ್ 31ವರೆಗೆ ಪಾಸ್‍ಪೋರ್ಟ್ ಮಾನ್ಯತೆ ಹೊಂದಿರಬೇಕು. 2022ರ ಫೆಬ್ರವರಿಯಲ್ಲಿ ಅರ್ಜಿಗಳ ಖುರ್ರಾ (ಲಾಟರಿ) ನಡೆಯಲಿದೆ.

ಈ ವರ್ಷ ಭಾರತದಿಂಧ ಕೇವಲ 10 ಎಂಬಾರ್ಕೇಶನ್ ಕೇಂದ್ರಗಳಿರಲಿವೆ. ಅನಿವಾಸಿ ಭಾರತೀಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿದಾರರು ಹಜ್ ಯಾತ್ರೆಗೆ ಹೊರಡುವ ಕನಿಷ್ಠ ಒಂದು ತಿಂಗಳ ಮೊದಲು ಕೋವಿಡ್-19ರ ಲಸಿಕೆ ಪಡೆದಿರಬೇಕು. 2022ರ ಮೇ 31ರಿಂದ ಹಜ್ ಯಾತ್ರಿಗಳಿಗೆ ವಿಮಾನಯಾನ ಪ್ರಾರಂಭವಾಗಲಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಹಜ್ ಯಾತ್ರೆಗೆ ಆನ್‍ಲೈನ್ ಪ್ರಕ್ರಿಯೆಗೆ ಈಗಾಗಲೇ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಚಾಲನೆ ನೀಡಿದ್ದು, ದೇಶಾದ್ಯಂತ ಆನ್‍ಲೈನ್ ಪ್ರಕ್ರಿಯೆ ಮೂಲಕ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ. ಕರ್ನಾಟಕದಿಂದ 2017ರಲ್ಲಿ 6161, 2018ರಲ್ಲಿ 7092, 2019ರಲ್ಲಿ 8337 ಮಂದಿ ಹಜ್ ಯಾತ್ರೆಗೆ ತೆರಳಿದ್ದರು. 2020 ಮತ್ತು 2021ರಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ ಹಜ್ ಯಾತ್ರೆ ಇರಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!