2 ಕೋವಿಡ್ ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ

ಹೊಸದಿಲ್ಲಿ, ಡಿಸೆಂಬರ್ 28: ಒಮೈಕ್ರಾನ್ ಹೆಚ್ಚುತ್ತಿರುವ ಬೆದರಿಕೆಯ ಮಧ್ಯೆ ಆರೋಗ್ಯ ಸಚಿವಾಲಯ 2 ಹೊಸ ಕರೊನಾ ಲಸಿಕೆಗಳು ಮತ್ತು ಒಂದು ಆಂಟಿ-ವೈರಲ್ ಔಷಧಿಗಳ ತುರ್ತು ಬಳಕೆಗೆ ಅನುಮೋದಿಸಿದೆ. ಎರಡು ಲಸಿಕೆಗಳಾದ ಕಾರ್ಬೆವಾಕ್ಸ್, ಕೊವೊವಾಕ್ಸ್ ಮತ್ತು ಆಂಟಿವೈರಲ್ ಡ್ರಗ್ ಮೊಲ್ಲುಪಿರಾವಿರ್ ಸೇರಿದಂತೆ 3 ಔಷಧಿಗಳಿಗೆ ಕೇಂದ್ರ ಸರ್ಕಾರ ತುರ್ತು ಬಳಕೆಗೆ ಒಂದೇ ದಿನದಲ್ಲಿ ಅನುಮೋದನೆ ನೀಡಿದೆ.

ಕಾರ್ಬೆವಾಕ್ಸ್ ಭಾರತದಲ್ಲಿ ತಯಾರಿಸಲಾದ ಮೊದಲ ‘ಆರ್‌ಬಿಡಿ ಪ್ರೊಟೀನ್ ಸಬ್-ಯೂನಿಟ್ ಲಸಿಕೆ’ ಎಂದು ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಇದನ್ನು ಹೈದರಾಬಾದ್ ಮೂಲದ ಸಂಸ್ಥೆ ಬಯೋಲಾಜಿಕಲ್-ಇ ಸಿದ್ಧಪಡಿಸಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದ ಪಾಲಿಗೆ ಇದು ಹ್ಯಾಟ್ರಿಕ್ ಲಸಿಕೆ ಎಂದು ಮಾಂಡವಿಯಾ ಹೇಳಿದ್ದಾರೆ.

ಭಾರತದಲ್ಲಿ ಇದುವರೆಗೆ ಮೂರು ಕರೋನಾ ಲಸಿಕೆಗಳನ್ನು ತಯಾರಿಸಲಾಗಿದೆ. ಭಾರತದಲ್ಲಿ ತಯಾರಿಸಲಾದ ಇತರ ಎರಡು ಲಸಿಕೆಗಳಲ್ಲಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಕೋವಿ ಶೀಲ್ಡ್ ಸೇರಿವೆ.

ಆಂಟಿ-ವೈರಲ್ ಮೊಲ್ನುಪಿರಾವಿರ್ ಮಹತ್ವ :

ನ್ಯಾನೊಪರ್ಟಿಕಲ್ ಲಸಿಕೆ ಕೊವಾವಾಕ್ಸ್ ಅನ್ನು ಪುಣೆ ಮೂಲದ ಎಸ್ಐಐ ತಯಾರು ಮಾಡುತ್ತದೆ. ಅಲ್ಲದೆ, 13 ಕಂಪನಿಗಳು ದೇಶದಲ್ಲಿ ಆಂಟಿವೈರಲ್ ಡ್ರಗ್ ಮೊಲ್ನುಪಿರವಿರ್ ಅನ್ನು ತಯಾರಿಸುತ್ತವೆ. ಕೋವಿಡ್‌ನ ಗಂಭೀರ ವಯಸ್ಕ ರೋಗಿಗಳಲ್ಲಿ ತುರ್ತು ಸಂದರ್ಭದಲ್ಲಿ ಮೊಲ್ನುಪಿರವಿರ್ ಬಳಸಲಾಗುತ್ತದೆ.

ತುರ್ತು ಬಳಕೆಗಾಗಿ ದೇಶದಲ್ಲಿ 8 ಲಸಿಕೆ :

ಇಲ್ಲಿಯವರೆಗೆ ದೇಶದಲ್ಲಿ ತುರ್ತು ಬಳಕೆಗಾಗಿ 8 ಲಸಿಕೆಗಳನ್ನು ಅನುಮೋದಿಸಲಾಗಿದೆ. ಇವುಗಳಲ್ಲಿ ಕೋವಿಶಿಲ್ಡ್, ಕೋವ್ಯಾಕ್ಸಿನ್, ಝೈಕೋವ-ಡಿ, ಸ್ಪುಟ್ನಿಕ್-ವಿ, ಮೊಡರ್ನಾ, ಜಾನ್ಸನ್ ಆಂಡ್ ಜಾನ್ಸನ್, ಕಾರ್ಬೆವಾಕ್ಸ್, ಕೊವೊವಾಕ್ಸ್ ಸೇರಿವೆ.

error: Content is protected !!