ತುಮಕೂರು:ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಓದಿದ್ರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂಬ ಪೋಷಕರ ನಂಬಿಕೆಯನ್ನ ತುಮಕೂರಿನ ಸರ್ವೋದಯ ಪದವಿ ಪೂರ್ವ ಕಾಲೇಜು ವಿದ್ಯಾಸಂಸ್ಥೆ ಅಕ್ಷರಶಃ ಹುಸಿಗೊಳಿಸಿದೆ.
ಜಿಲ್ಲೆಯ ಪ್ರತಿಷ್ಠಿತ ಸರ್ವೋದಯ ವಿದ್ಯಾಸಂಸ್ಥೆಗಳಲ್ಲಿ ಒಂದಾದ ತುಮಕೂರು ನಗರದ ಹೊರಪೇಟೆಯಲ್ಲಿರುವ ಸರ್ವೋದಯ ಪದವಿ ಪೂರ್ವ ಕಾಲೇಜು, ಪಿಯುಸಿ ವಿದ್ಯಾಭ್ಯಾಸ ಕ್ಕೆ ಜಿಲ್ಲೆಯಲ್ಲೆ ಹೆಸರುವಾಸಿಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಉದಾಹರಣೆಗಳು ಸಾಕಷ್ಟಿದೆ. ಇದೇ ಕಾರಣಕ್ಕೆ ಪೋಷಕರು ಪೈಪೊಟಿಗೆ ಬಿದ್ದವರಂತೆ ತಮ್ಮ ಮಕ್ಕಳನ್ನ ಈ ಕಾಲೇಜಿಗೆ ಸೇರಿಸುತ್ತಾರೆ. ಅದೇ ರೀತಿ ಹಲವಾರು ಕನಸು ಕಟ್ಟಿಕೊಂಡು ತಮ್ಮ ಮಕ್ಕಳನ್ನ ಸೇರಿಸಿದ್ದ ಪೋಷಕರಿಗೆ ಕಾಲೇಜು ಆಡಳಿತ ಮಂಡಳಿಯಿಂದ ಬಂದ ಒಂದು ಪತ್ರ ಬರಸಿಡಿಲು ಬಡಿದಂತೆ ಮಾಡಿದೆ.
ಹೌದು ಮಕ್ಕಳು ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಇನ್ನೇನು ಪೂರ್ವ ಮದ್ಯ ವಾರ್ಷಿಕ ಪರೀಕ್ಷೆಗಳು ಹತ್ತಿರ ಇದೆ, ಈ ವರ್ಷ ಮಕ್ಕಳು ಚೆನ್ನಾಗಿ ಓದಿ ಪಾಸಾದ್ರೆ ಡಾಕ್ಟರೋ, ಇಂಜಿನಿಯರೋ ಮಾಡಿಸೋಣ ಎಂಬ ಲೆಕ್ಕಚಾರದಲ್ಲಿ ಪೋಷಕರು ತೊಡಗಿದ್ದರು. ಆದರೆ ಕಾಲೇಜ್ ನಿಂದ ನಿಮ್ಮ ಪೋಷಕರ ಜೊತೆ ಮಾತನಾಡಬೇಕಾಗಿದೆ, ಕೂಡಲೇ ಕರೆತನ್ನಿ ಎಂದು ವಿದ್ಯಾರ್ಥಿ ಗಳ ಜೊತೆ ಪೋಷಕರಿಗೆ ಆಹ್ವಾನ ಪತ್ರ ಕಳಿಸಿದ್ದಾರೆ. ತುರ್ತು ಆಹ್ವಾನ ದಿಂದ ದಾವಂತದಲ್ಲೇ ಕಾಲೇಜಿಗೆ ಬಂದ ಪೋಷಕರಿಗೆ ಆಡಳಿತ ಮಂಡಳಿ ನಿಮ್ಮ ಮಕ್ಕಳ ಅಡ್ಮಿಷನ್ ರದ್ದಾಗಿದೆ ನೀವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಕೊಳ್ಳಿ ಎಂದಿದ್ದಾರೆ, ಆಡಳಿತ ಮಂಡಳಿ ಮಾತನ್ನ ಕೇಳಿದ ಪೋಷಕರಿಗೆ ಮುಂದೇನು ಎಂಬ ದಿಗಿಲು ಶುರುವಾಗಿದೆ.
ಸರ್ವೋದಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ದಾಖಲಾಗಿದ್ದ ಪಿಸಿಎಂಸಿ ವಿಭಾಗದ 150 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗಳ ದಾಖಲಾತಿಯನ್ನ ಆಡಳಿತ ಮಂಡಳಿ ಏಕಾಏಕಿ ರದ್ದುಗೊಳಿಸಿದೆ. ಕಾಲೇಜಿನಲ್ಲಿ 100 ವಿದ್ಯಾರ್ಥಿಗಳ ದಾಖಲಾತಿಗೆ ಮಾತ್ರವೇ ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು, ಆದರೂ ಕಾಲೇಜಿನ ಆಡಳಿತ ಮಂಡಳಿ 150 ವಿದ್ಯಾರ್ಥಿಗಳನ್ನ ದಾಖಲು ಮಾಡಿಕೊಂಡು ಎಡವಟ್ಟು ಮಾಡಿದೆ. 2023-24 ರ ಸಾಲಿನ ಪ್ರಥಮ ಪಿಯುಸಿ ಮುಗಿದು 2024-25 ರ ಸಾಲಿನ ದ್ವಿತೀಯ ಪಿಯುಸಿ ಗೆ ದಾಖಲಿಸಿಕೊಳ್ಳುವಾಗಲೂ ಮೌನವಾಗಿದ್ದ ಆಡಳಿತ ಮಂಡಳಿ, ಕಾಲೇಜು ಪ್ರಾರಂಭವಾಗಿ ಮಧ್ಯ ವಾರ್ಷಿಕ ಪರೀಕ್ಷೆಗಳು ಆರಂಭವಾಗುವ ಸಮಯದಲ್ಲಿ ದಿಡೀರ್ ದಾಖಲಾತಿಯನ್ನ ರದ್ದುಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನ ನಡು ನೀರಿನಲ್ಲಿ ಕೈಬಿಟ್ಟು ಚೆಲ್ಲಾಟವಾಡಿದೆ.
ಇದೇ ವಿಚಾರವಾಗಿ ಕೆಲಕಾಲ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ವಾಗ್ವಾದ ನಡೆಯಿತು, ಕೆಲ ಪೋಷಕರು ಆಡಳಿತ ಮಂಡಳಿಯ ಸೆಕ್ರಟರಿಯ ಕೈಕಾಲು ಹಿಡಿಯಲು ಮುಂದಾಗಿದ್ದು ನಮ್ಮ ಮಕ್ಕಳಿಗೆ ಅನ್ಯಾಯ ಮಾಡಬೇಡಿ ಎಂದು ಬೇಡಿಕೊಳ್ಳುತ್ತಿದ್ದ ದೃಷ್ಯ ಕಂಡು ಬಂತು. ಮಾಧ್ಯಮ ಗಳೊಂದಿಗೆ ಮಾತನಾಡಿದ ಪೋಷಕರು ಪ್ರತಿಷ್ಠಿತ ಕಾಲೇಜು ಎಂದು ಕಷ್ಟ ಪಟ್ಟು ಸಾಲ ಸೂಲಮಾಡಿ ಸಾವಿರಾರು ರೂ ಹಣತಂದು ಸೇರಿಸಿದರೆ ಈಗ ಮದ್ಯಂತರದಲ್ಲಿ ಏಕಾಏಕಿ ಬೇರೆ ಕಾಲೇಜಿಗೆ ಅಡ್ಮಿಷನ್ ಮಾಡಿಸಿ ಎನ್ನುತ್ತಿದ್ದಾರೆ…ಎಂದು ಎದೆಯೋಳಗಿನ ಸಂಕಟದಿಂದಲೇ ಪೋಷಕರು ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಪೋಷಕರ ಅಸಮಾಧಾನ ತಣಿಸಲು ಮುಂದಾದ ಆಡಳಿತ ಮಂಡಳಿ ನಿಮ್ಮ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ, ನಾವು ಪಿಯು ಶಿಕ್ಷಣ ಇಲಾಖೆ ವಿರುದ್ದ ಕೋರ್ಟ್ ಮೊರೆ ಹೋಗಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುತ್ತೇವೆ, ಸದ್ಯಕ್ಕೆ ಈಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಗಳನ್ನ ಅಡ್ಮಿಷನ್ ಮಾಡಿಸಿ, ಎಂದಿನಂತೆ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಬಂದು ತರಗತಿಗಳಲ್ಲಿ ಪಾಲ್ಗೊಳ್ಳಲಿ ಎಂದಿದ್ದಾರೆ. ಇದಕ್ಕೊಪ್ಪದ ಪೋಷಕರು ಸರ್ಕಾರಿ ಕಾಲೇಜಿನಲ್ಲಿ ದಾಖಲಾದ್ರೆ ಅಲ್ಲಿಯೇ ಕಾಲೇಜಿಗೆ ಹೋಗಬೆಕಾಗುತ್ತದೆ, ಈ ಕಾಲೇಜಿಗೆ ಹೇಗೆ ಬರಲು ಸಾಧ್ಯ, ಆಡಳಿತ ಮಂಡಳಿ ಪೋಷಕರ ಕಣ್ಣೊರೆಸುವ ನಾಟಕವಾಡುತ್ತಿದೆ, ನಮ್ಮ ಮಕ್ಕಳಿಗೆ ಅನ್ಯಾಯವಾದ್ರೆ ಅದಕ್ಕೆ ಆಡಳಿತ ಮಂಡಳಿಯ ಬೇಜಾವ್ದಾರಿಯೇ ಕಾರಣ, ನಾವು ಶಿಕ್ಷಣ ಇಲಾಖೆಗೆ ದೂರು ನೀಡಲಿದ್ದೇವೆ, ಜೊತೆಗೆ ಆಡಳಿತ ಮಂಡಳಿ ವಿರುದ್ದ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದರು.
ಅದೇನೆ ಇರಲಿ, ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆ ಮಾಡಿದ ಒಂದು ಎಡವಟ್ಟಿನಿಂದ ಇದೀಗ 50 ವಿದ್ಯಾರ್ಥಿಗಳ ಭವಿಷ್ಯ ಅಂತಂತ್ರ ಸ್ಥಿತಿಯಲ್ಲಿ ಸಿಲುಕಿ ನರಳುವಂತೆ ಮಾಡಿದೆ. ಮತ್ತೊಂದೆಡೆ ತಮ್ಮ ಮಕ್ಕಳನ್ನ ಡಾಕ್ಟರ್ ,ಇಂಜಿನಿಯರ್ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದಂತಹ ಪೋಷಕರನ್ನ ಚಿಂತೆಗೀಡುಮಾಡಿದೆ. ಕೂಡಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನ ಸರಿಪಡಿಸಿ, ಉತ್ತಮ ಭವಿಷ್ಯ ರೂಪಿಸುವಲ್ಲಿ ಕ್ರಮಕ್ಕೆ ಮುಂದಾಗಬೇಕಿದೆ.