’ಈ ಮಾರ್ಗದರ್ಶಿ’ ಮುಖೇನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೋಧನೆ

ತುಮಕೂರು: ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲಾಗಿರುವ ನಿಮಿತ್ತ ಶಾಲೆಗಳಿಲ್ಲದೆ ರಜೆಯಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ’ಈ ಮಾರ್ಗದರ್ಶಿ’ ವಿಶೇಷ ಆನ್ ಲೈನ್ ಕಾರ್ಯಕ್ರಮದ ಮೂಲಕ ಭೋದನೆ ನೀಡಲಾಗುತ್ತಿದೆ.

ತುಮಕೂರು ಹಾಗೂ ಮಧುಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ’ಈ ಮಾರ್ಗದರ್ಶಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ತಯಾರಿ ನಡೆಸಲಾಗುತ್ತಿದೆ ಇದಲ್ಲದೆ, ತುಮಕೂರು ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳಾದ ಕೇರಿಂಗ್ ವಿತ್ ಕಲರ್, ಮಂತ್ರ ಫಾರ್ ಚೇಂಜ್, ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ ಹಾಗೂ ಶಿಕ್ಷಾಲೋಕಂ ಸಹಯೋಗದೊಂದಿಗೆ ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದ ಮೂಲಕವೂ ಮನೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಜಿಲ್ಲಾ ಶಿಕ್ಷಕರ ಸಂಪನ್ಮೂಲ ತಂಡದೊಂದಿಗೆ ಪ್ರಶ್ನೋತ್ತರ ಬೋಧನಾ ತರಗತಿಗಳನ್ನೂ ನಡೆಸಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 8 ರಿಂದ ಕೋವಿಡ್-19 ರ ಸೋಂಕಿನಿಂದ ದೂರವಿರಲು ಕೈಗೊಳ್ಳಬೇಕಾದ ರಕ್ಷಣಾತ್ಮಕ ಕ್ರಮಗಳ ಕುರಿತು ಹಾಗೂ ಕೋರ್ ವಿಷಯಗಳ ಬಗ್ಗೆ, ಸಂಜೆ 5 ರಿಂದ ಭಾಷ ವಿಷಯಗಳ ಬಗ್ಗೆ ಮತ್ತು ಪ್ರತಿ ಭಾನುವಾರ ಅಲ್ಪಸಂಖ್ಯಾತ ಭಾಗಗಳಿಗೆ ಸಂಬಂಧಿಸಿದಂತೆ ವೆಬ್ ಲಿಂಕ್ https:/www.youtube.com/c/DIETTumkur ಮೂಲಕ ಬೋಧನೆ ಮಾಡಲಾಗುತ್ತಿದೆ.

ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಆನ್ ಲೈನ್ ಮೂಲಕ ಹಾಜರಾಗಿ ಬೋಧನಾ ತರಗತಿ ಪಾಠಗಳನ್ನು ವೀಕ್ಷಿಸಿ ಅಭ್ಯಾಸದೊಂದಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪೋಷಕರು ಈ ಅವಧಿಯಲ್ಲಿ ತಮ್ಮ ಮಕ್ಕಳಿಗೆ ಮೊಬೈಲ್ ನೀಡಿ ತಾವು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರುಗಳು ಆನ್ ಲೈನ್ ನಲ್ಲಿ ಭಾಗವಹಿಸಿ ಮಕ್ಕಳ ಕಲಿಕೆಗೆ ಹೆಚ್ಚು ಮಾರ್ಗದರ್ಶನ ನೀಡಬೇಕು. ಒಂದು ವೇಳೆ ಈ ಮೇಲಿನ ಸಮಯದಲ್ಲಿ ವೆಬ್ಲಿಂಕ್ ಮೂಲಕ ಭಾಗವಹಿಸಲು ತೊಡಕು ಉಂಟಾದಲ್ಲಿ ತುಮಕೂರು ಜಿಲ್ಲಾ ಡಯಟ್ ಯೂಟ್ಯೂಬ್ನಲ್ಲಿ ವೀಕ್ಷಿಸಬಹುದಾಗಿದೆ.

ಪ್ರಸ್ತುತ ಕೋವಿಡ್-19 ತೀವ್ರವಾಗಿ ಹರಡುತ್ತಿರುವುದರಿಂದ ಎಲ್ಲಾ ಶಿಕ್ಷಕರು, ನೌಕರರು, ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರದ ಮಾರ್ಗಸೂಚಿಯಂತೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಎಲ್ಲರೂ ಧೈರ್ಯದಿಂದ ಕೊರೋನಾ ಎಂಬ ಭಯಾನಕ ರೋಗವನ್ನು ಎದುರಿಸಬೇಕು. ಧೈರ್ಯಗುಂದದೆ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಪ್ರಾಥಮಿಕ ಚಿಕಿತ್ಸೆ ಪಡೆಯುವ ಮೂಲಕ ರೋಗವನ್ನು ನಿಯಂತ್ರಿಸಲು ಸಹಕರಿಸಬೇಕು ಎಂದು ತುಮಕೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ. ನಂಜಯ್ಯ ತಿಳಿಸಿದ್ದಾರೆ.

error: Content is protected !!